ಗ್ರೀಕ್ ಭಾಷೆ

	ಇಂಡೋ-ಯೂರೋಪಿಯನ್ ಪರಿವಾರದಲ್ಲಿ ಗಣನೆ ಮಾಡಲ್ಪಟ್ಟಿರುವ ಭಾಷೆಗಳಲ್ಲಿ ಗ್ರೀಕ್ ಬಹು ಮುಖ್ಯವಾದದೊಂದು ಭಾಷೆ. ಈ ಪದ ಪ್ರಾಚೀನ ಕಾಲದ ಮತ್ತು ಇಂದಿನ ಗ್ರೀಸ್ ದೇಶದ ಉಪಭಾಷೆಗಳಿಗೆಲ್ಲ ಸಮಾನ ರೀತಿಯಲ್ಲಿ ಅನ್ವಯವಾಗುತ್ತದೆ. ಏಷ್ಯ ಮೈನರಿನ ಪಶ್ಚಿಮ ದಂಡೆಯಲ್ಲಿದ್ದು ಬಾಲ್ಕನ್ ದ್ವೀಪ್, ದಕ್ಷಿಣ ಇಟಲಿ ಮತ್ತು ಸಿಸಿಲಿಗಳಲ್ಲಿ, ಅಯೋನಿಯನ್ ಮತ್ತು ಇಜೀಯನ್ ಸಮುದ್ರಗಳ ದ್ವೀಪದಲ್ಲಿ ಗ್ರೀಕ್ ಭಾಷೆಯ ಒಂದಿಲ್ಲೊಂದು ರೂಪ ವ್ಯವಹಾರದಲ್ಲಿತ್ತು. ಗ್ರೀಕಿನ ಮುಖ್ಯ ಭಾಷೆಗಳೆಂದರೆ ಅಯೋನಿಕ್, ಇಯಾಲಿಕ್, ಆರ್ಕೇಡಿಯನ್, ಸಿಪ್ರಿಯನ್ ಮತ್ತು ಡೋರಿಕ್, ಆಟ್ಟಿಕ್ ಎಂಬ ಗ್ರೀಕ್ ರೂಪ ಅಯೋನಿಕ್‍ನಲ್ಲಿ ಸೇರಿದೆ.

	ಕ್ರಿ.ಪೂ 6 ಮತ್ತು 5 ನೆಯ ಶತಮಾನಗಳಲ್ಲಿ ಈ ಉಪಭಾಷೆಗಳು ವ್ಯವಹಾರದಲ್ಲಿದ್ದ ಪ್ರದೇಶಗಳು ಹೀಗಿವೆ. ಏಷ್ಯ ಮೈನರಿನ ಮಧ್ಯಭಾಗ, ಇಜೀಯನ್ ಸಮುದ್ರ ದ್ವೀಪಗಳು ಯುಬೋಅ ಮತ್ತು ಛಾಲ್ಸಿಡಿಯನ್ ದ್ವೀಪಗಳು-ಇಲ್ಲೆಲ್ಲ ಅಯೋನಿಕ್ ಉಪ ಭಾಷೆಯೂ ಆಟಿಕ್ ದ್ವೀಪದಲ್ಲಿ ಆಟಿಕ್ ರೂಪವೂ ಉತ್ತರದಲ್ಲಿ, ಮುಖ್ಯವಾಗಿ ಲೆಸ್‍ವಾಸ್, ತೆಸ್ಸಲಿ ಮತ್ತು ಬೊಯೇಷಿಯಗಳಲ್ಲಿ ಇಯಲಿಕ್ ಉಪಭಾಷೆಯೂ, ಆರ್ಕೇಡಿಯದಲ್ಲಿ ಆರ್ಕೇಡಿಯನ್ ಭಾಷೆಯೂ, ಸಿಪ್ರಿಯದಲ್ಲಿ ಸಿಪ್ರಿಯನ್ ಭಾಷೆಯೂ, ಪೆಲೊಪನೀಸಿನಲ್ಲಿ, ಗ್ರೀಸಿನ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣ ಇಜೀಯನ್ ದ್ವೀಪಗಳಲ್ಲಿ ಡೋರಿಕ್ ಉಪಭಾಷೆಯೂ ಪ್ರಚಾರದಲ್ಲಿದ್ದವು. ಕ್ರಿ,ಪೂ ನಾಲ್ಕನೆಯ ಶತಮಾನದ ವೇಳೆಗೆ ಸಾಹಿತ್ಯದ ಹಿರಿಮೆಯಿಂದಾಗಿ ಮತ್ತು ರಾಜಕೀಯವಾಗಿ ಆಥೆನ್ಸಿನ ಪ್ರಾಧಾನ್ಯದಿಂದಾಗಿ ಆಟಿಕ್ ಉಪಭಾಷೆ ರಾಷ್ಟ್ರ ಭಾಷೆಯ ಸ್ಥಾನವನ್ನು ಗಳಿಸಿಕೊಂಡಿತು.

	ಗ್ರೀಕ್ ಭಾಷೆಯ ಅತಿ ಪ್ರಾಚೀನ ಲಿಖಿತ ರೂಪವನ್ನು ಕ್ರಿ.ಪೂ. ಎಂಟನೆಯ ಶತಮಾನದ ಶಾಸನಗಳಲ್ಲಿ ಕಾಣಬಹುದು. ಕ್ರಿ.ಶ. ನಾಲ್ಕನೆಯ ಶತಮಾನಕ್ಕೆ ಸೇರಿದ, ಚರ್ಮದ ಮೇಲೆ (ವೆಲಮ್) ಬರೆಯಲ್ಪಟ್ಟಿರುವ ಬೈಬಲ್ ಗ್ರಂಥವೇ ಗ್ರೀಕ್ ಭಾಷೆಯ ಪ್ರಾಚೀನ ಹಸ್ತಲಿಖಿತ ಪುಸ್ತಕ.

	ಗ್ರೀಕಿನ ಕೆಲವು ಮುಖ್ಯ ಲಕ್ಷನಗಳಿವು. ಇಂಡೊ-ಯೂರೋಪಿಯನ್ ಮೂಲಭಾಷೆಯ ಸ್ವರವರ್ಣಗಳು ಸಂಸ್ಕøತದಲ್ಲಿನಂತೆ ಬದಲಾವಣೆ ಹೊಂದದೆ ಇರುವುದು ಕಂಡುಬರುತ್ತದೆ. ಸಂಸ್ಕøತದಲ್ಲಿ ಉಳಿದಿರುವ ಮೂಲಭಾಷೆಯ ವರ್ಣವೊಂದಾದ ಋ ಗ್ರೀಕ್ ಭಾಷೆಯಲ್ಲಿ ಆರ್ ಮತ್ತು ರ ರೂಪದಲ್ಲಿ ಕಾಣಬರುತ್ತದೆ. ( ಸಂಸ್ಕøತದ ಪಿತೃಷು ಗ್ರೀಕ್ ಭಾಷೆಯ ಪತ್ರಸಿ) ರ ಕಾರದಿಂದ ಮೊದಲಾಗುವ ಪದಗಳಲ್ಲಿ ಪ್ರಾರಂಭದಲ್ಲಿದ್ದ ಮೂಲಭಾಷೆಯ ಧ್ವನಿಯೊಂದು ಸಂಸ್ಕøತದಲ್ಲಿ ನಷ್ಟವಾಗಿದೆಯಾದರೆ ಗ್ರೀಕಿನಲ್ಲಿ ಅದು ಉಳಿದುಬಂದಿದೆ. ಸಂಸ್ಕøತದ ರುಧಿರ ( ಗ್ರೀಕಿನಲ್ಲಿ ಎರುಥ್ರೋಸ್). ಸ್ವರಗಳೆರಡರ ನಡುವಣ ಸ ಮತ್ತು ಯ ಗ್ರೀಕಿನಲ್ಲಿ ಲೋಪ ಹೊಂದಿದೆ. (ಸಂಸ್ಕøತದ ತ್ರಸತಿ-ನಡುತ್ತಾನೆ=ಗ್ರೀಕಿನ ತ್ರೆ ಓ; ಸಂಸ್ಕøತದ ತ್ರಯಸ್-ಮೂರು= ಗ್ರೀಕಿನ ತ್ರೆ ಅಸ್). ಪದಾಂತ್ಯದಲ್ಲಿಯ ಮ ಗ್ರೀಕಿನಲ್ಲಿ ನ ಆಗಿದೆ (ಯುಗಂ-ನೊಗ= ಜುûಗೊನ್). ದ್ವಿತವ ದಂತ್ಯ ವರ್ಣಗಳಲ್ಲಿ ಮೊದಲ ವರ್ಣ ಸ ಆಗಿ ಮಾರ್ಪಟ್ಟಿದೆ. (ವೇತ್ಥ-ತಿಳಿ=ಒಯ್‍ಸ್ಥ) ಪದಾದಿಯ ಯ ಮತ್ತು ಸ ಗಳು ಹ ರೂಪವನ್ನು ತಾಳಿವೆ. (ಸಾ-ಅವಳು=ಹೇ ; ಯಸ್-ಯಾರು=ಹೊಸ್). ಮೇಲಿನ ಉದಾಹರಣೆಯಲ್ಲಿ ಕಂಡುಬಂದಂತೆ ಕೆಲವೊಮ್ಮೆ ಯ ಜû ಆಗಿ ಮಾರ್ಪಡುತ್ತದೆ. ಸ್ವರಗಳೆರಡರ ಮಧ್ಯದ ವ ಕಾರ ಗ್ರೀಕಿನಲ್ಲಿ ನಷ್ಟವಾಗಿದೆ. ಈ ಮಾರ್ಪಾಟಿನಿಂದ ಆ ಎರಡು ಸ್ವರಗಳು ಸಂಧಿಯ ಪರಿಣಾಮದಿಂದಾಗಿ ಒಂದು ಸ್ವರವಾಗುತ್ತದೆ. ಸ ಪೂರ್ವದ ಅನುನಾಸಿಕ ಲೋಪಗೊಂಡು ಅದರ ಪೂರ್ವಸ್ವರ ದೀರ್ಘವಾಗಿದೆ. (ತಾನ್=ತಾಸ್ < * ತಾನ್‍ಸ್).

	ಮಹಾಪ್ರಾಣ ಘೋಷ ವ್ಯಂಜನಗಳು ಗ್ರೀಕಿನಲ್ಲಿ ಅಘೋಷ ವ್ಯಂಜನಗಳ ರೂಪದಲ್ಲಿ ಉಪಲಬ್ದವಾಗಿದೆ. (ಧೂಮ-ಹೊಗೆ=ಥೂಮೊಸ್). ಮೂಲಭಾಷೆಯ ಕಂಠ್ಯವರ್ಣ ಗ್ರೀಕಿನಲ್ಲಿ ಪರ ಸ್ವರವನ್ನನುಸರಿಸಿ ಬದಲಾವಣೆ ಹೊಂದಿದೆ. ಪರ ಸ್ವರ ಅ ಅಥವಾ ಒ ಆಗಿದ್ದರೆ ಓಷ್ಠ್ಯ ವ್ಯಂಜನವಾಗಿಯೂ ಎ ಮತ್ತು ಇ ಆಗಿದ್ದಾಗ ದಂತವರ್ಣವಾಗಿಯೂ ಇತರ ಕಡೆಗಳಲ್ಲಿ ಕಂಠ್ಯವಾಗಿಯೂ ಕಂಡುಬರುತ್ತದೆ.

	ಸಂಸ್ಕøತದಲ್ಲಿರುವಂತೆಯೇ ಗ್ರೀಕ್ ಭಾಷೆಯಲ್ಲೂ ನಾಮಪದಗಳಲ್ಲಿ ಮೂರು ಬಗೆಯ ಲಿಂಗಗಳೂ (ಪುಲ್ಲಿಂಗ್, ಸ್ತ್ರೀಲಿಂಗ ಮತ್ತು ನಪುಸಕಲಿಂಗ), ಮೂರು ಬಗೆಯ ವಚನಗಳು (ಏಕ, ದ್ವಿ ಮತ್ತು ಬಹುವಚನಗಳು) ಇವೆ. ಹಾಗೆಯೇ ಐದು ವಿಭಕ್ತಿ ರೂಪಗಳಿವೆ. ಸಂಸ್ಕøತದ ಪಂಚಮಿ ರೂಪಕ್ಕೆ ಇಲ್ಲಿ ಷಷ್ಠೀ ರೂಪವನ್ನೇ ಬಲಸಿದೆ. ಸಂಸ್ಕøತದ ತೃತೀಯ, ಸಪ್ತಮಿ ಮತ್ತು ಚತುರ್ಥಿಯಲ್ಲಿಯ ರೂಪಗಳಿಗೆ ಸರಿಸಮಾನವಾದ ರೂ ಗ್ರೀಕಿನಲ್ಲಿ ಕೇವಲ ಚತುರ್ಥಿರೂಪ.

	ಕ್ರಿಯಾಪದಗಳಲ್ಲಿ ಸಂಸ್ಕøತದಲ್ಲಿ ಕಂಡುಬರುವಂತೆ ಪರಸ್ಮೈ ಮತ್ತು ಆತ್ಮನೇ ಭೇಧಗಳಿವೆ. ಇತರ ವಿವರಗಳೂ ಹೆಚ್ಚುಮಟ್ಟಿಗೆ ಸಂಸ್ಕøತದಲ್ಲಿರುವಂತೆಯೇ ಇದೆಯೆನ್ನಬಹುದು.

	ಸಂಸ್ಕøತದಲ್ಲಿರುವ ಉದಾತ್ತ, ಅನುದಾತ್ತ ಮತ್ತು ಸ್ವರಿತಗಳಿಗೆ ಸರಿಸಮವಾಗಿ ಗ್ರೀಕಿನಲ್ಲೂ ಮೂರು ಸ್ವರಗಳಿವೆ (ಆಕ್ಸೆಂಟ್ಸ್). ಅವುಗಳ ಸ್ವರೂಪ ಮತ್ತು ವರ್ಣನೆ ಎಲ್ಲ ಸಂಸ್ಕøತ ಗ್ರಂಥಗಳಲ್ಲಿ ಕಂಡುಬರುವಂತೆ ಈ ಭಾಷೆಯ ಶಿಕ್ಷಾಗ್ರಂಥದಲ್ಲೂ ಕಂಡುಬರುತ್ತದೆ.

	ಕ್ರಿ.ಪೂ. 150ಕ್ಕೆ ಮೊದಲಿನ ಗ್ರೀಕ್ ಭಾಷೆಯಲ್ಲಿ ಎಯ್ (ei) ಮತ್ತು ಇ (i) ಭಿನ್ನವಾಗಿದ್ದವು. ತದನಂತರದ ಅವೆರೆಡರ ಲಿಖಿತ ರೂಪಗಳೂ ಒಂದೇ ಧ್ವನಿಸೂಚಕಗಳಾದವು. ಹಾಗೆಯೇ ಮೂರನೆಯ ಶತಮಾನದ ಗ್ರೀಸಿನಲ್ಲಿ ಸಂಧ್ಯಕ್ಷರಗಳಿದ್ದುವು. ಕ್ರಿ.ಪೂ. ಎರಡನೆಯ ಶತಮಾನದ ಅಂತ್ಯಭಾಗದ ವೇಳೆಗೆ ಅವುಗಳೆಲ್ಲ ಸಮಾನಾಕ್ಷರಗಳಾಗಿ ಬದಲಾದುವು. ಪ್ರಾಚೀನ ಗ್ರೀಕ್ ಇಂದಿನ ಗ್ರೀಕ್ ಆಗಿ ಬದಲಾವಣೆಯಾಗಲು ಕಾರಣವಾದ ವ್ಯತ್ಯಾಸಗಳೆಲ್ಲ ಹೆಚ್ಚು ಮಟ್ಟಿಗೆ ಕ್ರಿ.ಶ ಮೊದಲನೆಯ ಮೂರು ನಾಲ್ಕು ಶತಮಾನಗಳ ಮತ್ತು ಅನಂತರದ ಮೂರು ನಾಲ್ಕು ಶತಮಾನಗಳ ನಡುವಣ ಕಾಲದಲ್ಲಿ ನಡೆದುವೆನ್ನಬಹುದು.

	ಪ್ರಾಚೀನ ರೂಪದ ಉದಾತ್ತ, ಅನುದಾತ್ತ, ಸ್ವರಿತ ಸ್ವರಗಳು ಇಂದಿನ ಗ್ರೀಕಿನಲ್ಲಿ ಉಳಿದುಬಂದಿಲ್ಲ. ನಾಮಪದಗಳಲ್ಲಿ ಮತ್ತು ಕ್ರಿಯಾಪದಗಳಲ್ಲಿ ಕಂಡುಬಂದ ದ್ವಿವಚನ ರೂಪ ನಷ್ಟವಾಗಿದೆ. ಹಾಗೆಯೇ ಚತುರ್ಥಿ ನಷ್ಟವಾಗಿ ಅದರ ಉಪಯೋಗವಿದ್ದ ಕಡೆ ಈಗ ದ್ವಿತೀಯ ಅಥವಾ ಷಷ್ಠಿ ವಿಭಕ್ತಿ ರೂಪದ ವಾಡಿಕೆ ಕಂಡುಬರುತ್ತದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಇಂದಿನ ಗ್ರೀಕ್ ಭಾಷೆಯ ಶಬ್ಧ ಭಂಡಾರದಲ್ಲಿ ಅನ್ಯಭಾಷೆಯ ಶಬ್ದಗಳನೇಕವನ್ನು ಕಾಣಬಹುದು. ಲ್ಯಾಟಿನ್, ಇಟಾಲಿಯನ್ ಮತ್ತಿತರ ಆ ಗುಂಪಿಗೆ ಸೇರಿದ ಉಪಭಾಷೆಗಳು, ಸ್ಲಾವಿಕ್, ಅಲ್ಬೇನಿಯನ್ ಮತ್ತು ಮುಖ್ಯವಾಗಿ ತುರ್ಕಿ ಭಾಷೆಯ ಪದಗಳು ಇಂದಿನ ಗ್ರೀಕ್ ಭಾಷೆಯಲ್ಲಿ ತುಂಬಿಕೊಂಡಿವೆ.										(ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ